ಬಾಲ್ಯ



ನೆನಪಿನ ಓಣಿಯಲ್ಲಿ

ಮನವಿಂದು ನಡೆದಿದೆ

ಬಾಲ್ಯವದೇಕೊ ಮರುಕಳಿಸಿ

ಕಣ್ಣ ಮುಂದೆ ನಿಂತಿದೆ


ಆಣೆಕಲ್ಲು, ಲಗೋರಿಯಾಟ

ಕಣ್ಣಾಮುಚ್ಚೆ ಕಾಡೆಗೂಡೆ

ಸಂಜೆ ಆದರೆ ಸಾಕು

ಹಾಜರು ಸ್ನೇಹಿತರ ಪಡೆ


ಮಳೆಯಲ್ಲಿ ತೇಲಿದ

ಕಾಗದದ ದೋಣಿಗಳು

ಮಳೆಯಲ್ಲಿ ನೆಂದು

ಅಮ್ಮನಿಂದ ತಿಂದ ಏಟುಗಳು


ಪುಸ್ತಕದಲ್ಲಿ ಎಲ್ಲೆಲ್ಲೂ

ಥರ ಥರದ ಸ್ಟಿಕ್ಕರ್ಗಳು

ಜಾತ್ರೆಯಲ್ಲಿ ತೆಗೆಸಿಕೊಂಡ

ಬಣ್ಣ ಬಣ್ಣದ ಬಿಂದಿ,ಕ್ಲಿಪ್ಪುಗಳು


ಮುಗ್ಧ ನಂಬಿಕೆಗಳ ಮಧ್ಯೆ

ಪುಸ್ತಕದಲ್ಲಿಟ್ಟ ನವಿಲುಗರಿಗಳು

ಬೆಳ್ಳಿ,ಬಂಗಾರದೆಂಬಂತೆ ತೆಗೆದಿಟ್ಟ

ಕ್ಯಾಡಬರಿ ಚಾಕಲೇಟ್ ಹಾಳೆಗಳು


ಎಣ್ಣೆ ಹಚ್ಚಿ ರಿಬ್ಬನ್ ಹಾಕಿ

ಎತ್ತಿ ಕಟ್ಟಿದ ಜಡೆಗಳು

ಎಣ್ಣೆ ಜಾಸ್ತಿ ಆಯಿತೆಂದು

ಅತ್ತು ಮಾಡಿದ ರಂಪಗಳು


ಶಾಲೆ ವಿರಾಮದಲ್ಲಿ

ಗೆಳತಿಯರೊಡಗೂಡಿ

ತಿಂದ ಚಿಕ್ಕಿ, ಬೋಟಿಗಳ

ಲೆಕ್ಕವಿಡಲಾಗದು ನೋಡಿ


ಅದೇನು ಖುಷಿ ಬರೆಯಲು

ಪುಸ್ತಕದ ಮೊದಲ ಹಾಳೆಯಲ್ಲಿ

ಮುದ್ದಾದ ಅಕ್ಷರಗಳಲ್ಲಿ

ಮೂಡಿದ್ದವು ಹೆಸರು, ವಿಷಯಗಳಲ್ಲಿ


ಸ್ನೇಹಿತರ ಜೊತೆಗಿನ

ಬೆಳದಿಂಗಳೂಟದ ನೆನಪು

ಈಗಲೂ ಮನಕೆ

ಎರೆಯುತಿದೆ ತಂಪು


ದೂರದಲ್ಲಿ ಐಸ್ಕ್ರೀಮ್

ಗಾಡಿಯ ಶಬ್ದಕೆ ಮನವರಳಿ

ತಮ್ಮನ ಮುಂದೆ ಮಾಡಿ

ಅಮ್ಮನಿಗೆ ಪಿಠೀಕೆ ಹಾಕಿದ್ದು ಕೇಳಿ


ಬರಿಯಲು ಕುಳಿತರೆ 

ಮುಗಿಯದು ಸಾಲುಗಳು

ಹಾಗಿವೇ ನಾವು ಕಳೆದ

ಆ ಬಾಲ್ಯದ ದಿನಗಳು


ಮನಸಿನ ಕಪ್ಪೆ ಚಿಪ್ಪಿನಲ್ಲಿ

ಮುತ್ತುಗಳಂತೆ ಅವಿತಿವೆ

ಅದಕೇ ಮನ,ಹೃದಯಕೆ

ಇಷ್ಟು ಹತ್ತಿರವಾಗಿವೆ


ಮತ್ತೇ ಬೇಕಿದೆ

ಆ ಬಾಲ್ಯದ ದಿನಗಳು

ನಿಶ್ಚಿಂತತೆಯಲ್ಲಿ

ಕಳೆದ ಆ ಸುದಿನಗಳು

-ಸೀಮಾ





Comments