ಕನಸುಗಳು


ಆಗತಾನೇ ರೆಕ್ಕೆ ಬಲಿತು

ತಾಯಿ ಮಡಿಲಿಂದ ಹೊರಬಂದು

ಗರಿಗೆದರಿ ಹಾರಲು ಅಣಿಯಾದ

ಪುಟ್ಟ ಹಕ್ಕಿಗಳ ಹಾಗೆ

ಮನದ ಗೂಡಲ್ಲಿ ಗರಿಗೆದರಿದ

ಹೊಸ ಕನಸುಗಳು


ಪ್ರಿಯಕರನ ಕಾಣಲು ಕಣ್ಣ

ಕಾಂತಿಯು ಇಮ್ಮಡಿಯಾಗಿ

ತುಟಿಮೇಲೆ ಸಿಹಿನಗೆಯು

ಮೂಡಿ ಎದೆಯರಳುವಂತೆ

ಮನದ ತೋಟದಲ್ಲಿ ನಗುತ

ಬಿರಿಯುತಿರುವ ಹದಿನಾರರ

ಹರೆಯದಂತ ಕನಸುಗಳು

 

ಹಸಿರು ಹುಲ್ಲುಗಾವಲಿನಲಿ

ಹಗ್ಗ ಬಿಚ್ಚಿಕೊಂಡು ಪುಟ್ಟ ಆಕಳ

ಕರುವೊಂದು ನೆಗೆನೆಗೆದು ಓಡುವ ಹಾಗೆ

ಮನದಗಾವಲಿನಲ್ಲಿ ಹುಚ್ಚೆದ್ದು ಕುಣಿವ

ಸುಂದರ ಹೊಂಗನಸುಗಳು


ದೂರದ ಹಾದಿ, ನಡೆನಡೆದು

ಸುಸ್ತಾಗಿ ದಾರಿಬದಿಗಿನ ಮರದಡಿಯಲಿ

ದಣಿವಾರಿಸಲು ಕುಳಿತ ಮುದಿಜೀವದಂತೆ

ವಸಂತಗಳಿಂದ ಮನದ ದಾರಿಯಲಿ

ನಡೆದು ಇನ್ನೂ ಗಮ್ಯ ಸೇರದ

ಹಳೆಯ ಕನಸುಗಳು


ಬೆಳಗಿನಿಂದ ಅಮ್ಮನನ್ನು ಕಾಣದೇ

ಆಕೆಯನ್ನು ಹುಡುಕಿಕೊಂಡು ಹೋಗಿ

ಅಮ್ಮನ ಬಿಸಿಯಪ್ಪುಗೆಯಲ್ಲಿ 

ಸಾರ್ಥಕತೆ ಕಂಡಂತೆ

ಕಷ್ಟದ ದಾರಿಯಲಿ ನಡೆದು

ಕೊನೆಗೂ ಪೂರ್ತಿಯಾಗಿ 

ಮನಕೆ ಸಾರ್ಥಕತೆ ಸಿಕ್ಕ ಕನಸುಗಳು


ಕಡಲಲೆಗಳ ಸೆಳೆತಕ್ಕೆ ತತ್ತರಿಸಿ 

ಈಜಲು ಕೈ ಬಡಿಯಲಾಗದೇ

ಕಡಲಾಳ ಸೇರಿ ಉಸಿರು

ನಿಂತ ಜೀವಗಳಂತೆ

ಜವಾಬ್ದಾರಿಯ ಸಾಗರದಲಿ

ಈಜಲಾರದೆ ಉಸಿರುಗಟ್ಟಿ

ಅಸುನೀಗಿದ ಕನಸುಗಳು


ಹೀಗೇ ನೂರೆಂಟು ಬಗೆಯ ಆಸೆ,ಕನಸುಗಳ

ಕಥೆಯೇ ಜೀವನ.


Comments