ಬಾಲ್ಯದ ನೆನಪು

ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಧಾರವಾಡದ ಸಾಧನಕೇರಿಯಲ್ಲಿ ತವರುಮನೆ.ಪಾಟಿಚೀಲ ಬೆನ್ನಿಗೇರಿಸಿ ಬಸ್ಸಿಗಾಗಿ ಬೇಂದ್ರೆ ತಾತನ ಮನೆ ಮುಂದಿರುವ ಬಸ್ ನಿಲ್ದಾಣದಲ್ಲಿ ಕಾದು ನಿಲ್ಲುತ್ತಿದ್ದುದು, ತುಂಬಿಕೊಂಡೇ ಬರುತ್ತಿದ್ದ ಬಸ್ ಏರಲು ಅದೇನು ಪರದಾಟ.ಮೊದಲನೇ ಇಯತ್ತೆಯಿಂದ ಡಿಗ್ರಿ ಮುಗಿಯುವವರೆಗೂ ಸಿಟಿ ಬಸ್ನಲ್ಲೇ ಪ್ರಯಾಣ.

ಶಾಲೆಯ ವಿರಾಮದಲ್ಲಿ ಗೆಳತಿಯರೆಲ್ಲರೂ ಕುಳಿತು ಎಲ್ಲರೂ ಊಟದ ಡಬ್ಬಿಯಿಂದ ಒಂದೊಂದು ತುತ್ತು ತೆಗೆದು ತಿನ್ನುತ್ತಿದ್ದದ್ದು.ನನಗೆ ಖಾರ ಇಷ್ಟವೆಂದು ಒಬ್ಬ ಸ್ನೇಹಿತೆ ಅವರ ಮನೆಯಲ್ಲಿ ಮಾಡುವ ಮಸಾಲೆ ಖಾರವನ್ನು ನನಗೆಂದೇ ಜಾಸ್ತಿ ಹಾಕಿಕೊಂಡು ಬಂದು ಕೊಡುತ್ತಿದ್ದದ್ದು.ಹೈಸ್ಕೂಲ್ ನಲ್ಲಿ ಹುಡುಗರ ಜೊತೆಮಾತನಾಡಲು ಅದೇನೊ ಹಿಂಜರಿಕೆ.ಕ್ರಶ್ ನ ಜೊತೆ ಮಾತನಾಡಲು ನಾಚಿಕೆ, ಆದರೂ ಮಾತನಾಡುವ ಬಯಕೆ😃.ಗೆಳತಿಯರು ಎಲ್ಲ ಸೇರಿ ಶಾಲೆ ಹತ್ತಿರದ ಅಂಗಡಿಯಲ್ಲಿ ಹತ್ತು ಪೈಸೆಗೊಂದು ಸಿಗುತ್ತಿದ್ದ ಕೆಂಪು ಶೇಂಗಾ ಚಿಕ್ಕಿ ತಿನ್ನುತ್ತಿದ್ದದ್ದು. ಆ ಹತ್ತು ಪೈಸ ಚಿಕ್ಕಿ ಕೊಡುತ್ತಿದ್ದ ಸಂತಸ ಈಗೀನ ಡೇರಿಮಿಲ್ಕ್ ಸಿಲ್ಕ್, ಅಮುಲ್ ಚಾಕಲೇಟ್ ತಿಂದರೂ ಬರದು.ತಮ್ಮನ ಜೊತೆ ತಿಂಡಿಗಾಗಿ, ಮಾಡಬೇಕಾಗಿರುವ ಕೆಲಸಕ್ಕಾಗಿ ಜಗಳವಾಡುತ್ತಿದ್ದದ್ದು.ಕೊನೆಗೆ ಅಮ್ಮನ ಕಡೆ ಬೈಸಿಗೊಂಡು ಸುಮ್ಮನಾಗುತ್ತಿದ್ದದ್ದು.

ನಾವು ಆಡುತ್ತಿದ್ದದ್ದು ಮನೆ ಹೊರಗಿನ ಆಟಗಳೇ. ಆಡಿ ಆಡಿ ಸುಸ್ತಾಗಿ ಕೊನೆಗೆ ಅಮ್ಮನ ಕೈಲಿ ಬೈಸಿಕೊಂಡು ಮನೆ ಸೇರುತ್ತಿದ್ದದ್ದು.ನಂತರ ಹೊಂವರ್ಕ್ ಮುಗಿಸಿ ಟೀವಿಲಿ ಬರುತ್ತಿದ್ದ ದೂರದರ್ಶನ ಒಂದೇ ಚ್ಯಾನೆಲ್ ನೋಡುತ್ತಿದ್ದೆವು.ರಾತ್ರಿ ಎಲ್ಲರೂ ಕುಳಿತು ದೂರದರ್ಶನ ನೋಡುತ್ತಊಟ ಮಾಡುತ್ತಿದ್ದದ್ದು.ರವಿವಾರ ಬೆಳಿಗ್ಗೆ ದೂರದರ್ಶನದಲ್ಲಿ ಬರುತ್ತಿದ್ದ ರಂಗೋಲಿ ಹಾಡಿನ ಕಾರ್ಯಕ್ರಮ ನೋಡಲು ರಜೆ ಇದ್ದರೂ ಬೇಗ ಏಳುವ ಹುಚ್ಚು.

ಬೇಸಿಗೆ ರಜೆಯಲ್ಲಿ ಹುಣಿಸೆ ಚಿಗಳಿ ಮಾಡುವ ಸಂಭ್ರಮ.ಸ್ನೇಹಿತರು ಎಲ್ಲ ಸೇರಿ ಒಬ್ಬೊಬ್ಬರೊಂದು ಚಿಗಳಿಗೆ ಬೇಕಾಗುವ ಸಾಮಾನು ತಂದು ಒಂದು ಕಡೆ ಚಿಗಳಿ ಕುಟ್ಟುತ್ತಿದ್ದೆವು.ಹಾಗೇ ಬೇಸಿಗೆ ಎಂದರೆ ನೆನಪಾಗುವುದು ಸಂಡಿಗೆ,ಹಪ್ಪಳ ಮಾಡುವುದು. ಅಮ್ಮನಿಗೆ ತಾರಸಿಯ ಮೇಲೆ ಸಂಡಿಗೆ ಇಡಲು ಸಹಾಯ ಮಾಡುವುದು ಒಂದು ಕೆಲಸ.ಉದ್ದಿನ ಹಪ್ಪಳದ ಹಿಟ್ಟನ್ನು ಹಸಿದು ಹಾಗೇ ತಿನ್ನಲು ಏನು ಮಜ ಅಂತೀರಾ! ಇನ್ನೊಂದು ಬೇಸಿಗೆಯ ನೆನಪೆಂದರೆ ಅಪ್ಪನನ್ನು ಮಾವಿನ ಹಣ್ಣಿಗಾಗಿ ಪೀಡಿಸಿ, ಅವರು ತಂದಾಗ, ನಮಗೇ ಒಳ್ಳೇ ಸಿಹಿಯಾದ ಹಣ್ಣು ಸಿಗಬೇಕೆಂಬ ಆಸೆ ಬೇರೆ ಮತ್ತು ವರ್ಷಕ್ಕೊಮ್ಮೆ ಬೇಸಿಗೆಯ ವೇಳೆ ಮಾಡುತ್ತಿದ್ದ ರಸ್ನಾ ಪೇಯ. ಅಪರೂಪ ನಮಗೆ ಇಂಥವೆಲ್ಲ ಆ ಕಾಲದಲ್ಲಿ.

ಆಗ ರೇಡಿಯೊದಲ್ಲಿ ಬರುತ್ತಿದ್ದ ಬೆಳಗಿನ ವಾರ್ತೆ, "ಇದು ಆಕಾಶವಾಣಿ ಧಾರವಾಡ....ವಾರ್ತೆಗಳು. ಓದುತ್ತಿರುವವರು ನಾಗೇಶ್ ಶಾನಭಾಗ" ಎನ್ನುವ ಧ್ವನಿಯು ಈಗಲೂ ಕಿವಿಯಲ್ಲಿ ಗುಃಞಗುಡುತ್ತೆ. ಆಗ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳ ನೆನಪು ಇಂದಿಗೂ ಅಚ್ಚುಹಸಿರು. ವಿವಿಧಭಾರತಿಯಲ್ಲಿ ಬರುತ್ತಿದ್ದ....ಆಪ್ ಕಿ ಫರಮಾಯಿಷ್, ಮನ ಚಾಹೇ ಗೀತ, ಛಾಯಾಗೀತ, ಭೂಲೇ ಬಿಸರೆ ಗೀತ ಹಿಂದಿ ಹಾಡಿನ ಕಾರ್ಯಕ್ರಮಗಳನ್ನು ಕೇಳಿ ಬೆಳೆದಿದ್ದಕ್ಕೆ ಇಂದಿಗೂ ಹಳೆಯ ಹಿಂದಿ ಹಾಡುಗಳೆಂದರೆ ಒಲವು.ಹಾಡು ಕೇಳುವ ಹುಚ್ಚು ಆವಾಗಿನಿಂದಲೇ ನನಗೆ.

ಆಡಂಬರವಿಲ್ಲದ ಸರಳ ಜೀವನವಾಗ.....ಚಿಕ್ಕ ಆಸೆಗಳು, ಸಿಕ್ಕಿದರಲ್ಲೇ ತೃಪ್ತಿಪಡುವ ಮನಸು.ಒಟ್ಟಿನಲ್ಲಿ ಚಂದದ ಬಾಲ್ಯ ನಮ್ಮದಾಗಿತ್ತೆಂಬ ಸಮಾಧಾನ,ಸಂತಸ😊

Comments

  1. Thank you madam for the post and you brought back my childhood memories of our Dharwad! I follow you on X too.

    ReplyDelete

Post a Comment