ಕಪ್ಪೆ ಚಿಪ್ಪು


ನೀಲಿ ಬಾನಿನಡಿ

ಭೋರ್ಗರೆವ ಶರಧಿ

ಹುದುಗಿಹುದು ಒಡಲೊಳಗೆ

ಅದೆಷ್ಟು ಜೀವರಾಶಿ


ಅದೆಷ್ಟು ಬಣ್ಣದ ಬಟ್ಟೆ 

ತೊಟ್ಟಿದ್ದವೀ ಮೃದ್ವಂಗಿಗಳು

ಮೇಲ್ಮೈ ತುಂಬ ಚಂದದ 

ಚುಕ್ಕೆಗಳು , ಗೆರೆಗಳು


ಉಸಿರಿರುವವರೆಗೆ

ಅಂಬುಧಿಯ ಒಡಲು

ನಿರ್ಜೀವವಾದೊಡೆ

ಹೊರಗೆಸೆಯುವುದು ಕಡಲು


ಈಗವಕೆ ಮನೆಯು

ಈ ಮರಳತೀರ

ಅನಿವಾರ್ಯ ಸಹಿಸುವುದು

ಕಾಲ್ತುಳಿತದ ಭಾರ


ಮಕ್ಕಳಿಗೆ ಕೌತುಕವು

ಇವುಗಳ ಹೆಕ್ಕಲು

ಪುಟ್ಟ ಪುಟ್ಟ ಕೈಗಳಲಿ

ಕಪ್ಪೆಚಿಪ್ಪುಗಳೇ ತುಂಬಲು


ಹೆಕ್ಕಿಕೊಂಡವು ಸೇರುವವು

ಮಕ್ಕಳೊಡನೆ ಮನೆಯ

ಇನ್ನುಳಿದವುಗಳಿಗೆ

ಮತ್ತೆ ಮರಳೇ ಆಶ್ರಯ


-ಸೀಮಾ


Comments