ದ್ವಂದ್ವ


ಕಡಲ ದಡದಲಿ ನಿಂತಾಗ

ಯೋಚನೆಯೊಂದು ಸುಳಿಯಿತು

ಎರಡರಲ್ಲಿ ಯಾರು ಅಸಹಾಯಕರೆಂದು

ಚಲಿಸಲಾಗದ ದಡವೋ

ಚಲಿಸದೇ ಇರಲಾಗದ ಅಲೆಯೋ?


ದಿನವೂ ಸಂಜೆಯಲಿ ಅಲೆಗಳ

ಮೇಲೆ ತೇಲುತ ಹೋಗಿ 

ರಂಗೇರಿದ ದಿಗಂತದಲ್ಲಿ

ಜಾರುವ ರವಿಗೆ ಪ್ರೇಮದಿ

ವಿದಾಯ ಹೇಳುವ ಆಸೆ 

ಇರಬಹುದಲ್ಲವೇ ದಡಕೆ?


ಹಗಲು ರಾತ್ರಿಯೆನ್ನದೇ

ಏರಿಳಿದು ಕುಣಿಕುಣಿದು

ದಡಕೆ ಬಂದಪ್ಪಳಿಸಿದಾಗ

ದಡಕೆ ಆತು ಕುಳಿತು 

ಕೊಂಚ ವಿರಮಿಸುವ

ಬಯಕೆ ಇರಬಹುದಲ್ಲವೆ ಅಲೆಗೆ?

✍️ಸೀಮಾ

Comments