ಹೀಗೊಂದು ಪ್ರೇಮ ಸಂಧ್ಯಾ
ರಂಗೇರಿದ ಸಂಜೆ ಕಡಲ ದಂಡೆಯಲ್ಲಿ
ಬರಿಗಾಲಲ್ಲಿ ತಣ್ಣನೆಯ ಮರಳ ಮೇಲೆ
ಮೆಲ್ಲಗೆ ಸಾಗುತ್ತಿದ್ದ ಅವರ
ಕೈ ಬೆರಳುಗಳು
ಮೊದಲ ಬಾರಿಗೆ ಒಂದಕ್ಕೊಂದು ಬೆಸೆದವು.
ಸೂರ್ಯಾಸ್ತದ ಬಾನ ಕೆಂಪು
ಅವಳ ಕೆನ್ನೆಗೆ ಸಿಂಚನವಾಯಿತೇನೊ
ಅನ್ನುವಂತೆ ಅವಳ ಕೆನ್ನೆಗಳು ರಂಗೇರಿದವು.
ಅವನಿಗೂ ರೋಮಾಂಚನ,
ಇಬ್ಬರ ಮೊಗದ ಮೇಲೆ ನಗು.
ಅಲೆಗಳ ಸ್ಪರ್ಶ ಅನುಭವಿಸುತ್ತ
ಮೌನದಿ ಹೆಜ್ಜೆ ಹಾಕಿದ್ದರು.
ಅವರ ಹೃದಯಗಳು
ಸಂಭಾಷಣೆಯಲ್ಲಿ ನಿರತವಾದವು.
ಒಮ್ಮೊಮ್ಮೆ ನಾವು ತುಟಿಯಿಂದ ಏನೂ
ಹೇಳದಿದ್ದರೂ ಹೃದಯಗಳು ಅರಿತುಬಿಡುತ್ತವೆ.
ಮನೆಗೆ ಹೋಗಲು ಕಾತರನಾಗಿದ್ದ
ಆ ನೇಸರ ಮುಗುಳ್ನಗುತ್ತ
ಇವರಿಬ್ಬರ
ಪ್ರಣಯಕ್ಕೆ
ಸಾಕ್ಷಿಯಾಗಿದ್ದ.
Comments
Post a Comment