Posts

Showing posts from September, 2024

ಮೊದಲ ಭೇಟಿ

Image
Image courtesy: Pinterest ಅವನದೇ ಯೋಚನೆಗಳ ಬಲೆಯ ಮನದಲಿ ಹೆಣೆಯುತ ದಾರಿಯಲ್ಲಿ ಸಾಗುತ್ತಿದ್ದೆ. ದಾರಿ ಎರಡೂ ಬದಿಯಲಿ ಬಣ್ಣಬಣ್ಣದ ಹೂ ಗಿಡಗಳು ದಾರಿಯಲ್ಲಿ ಉದುರಿಬಿದ್ದ  ಗುಲ್ಮೋಹರ್ ಹೂಗಳ ಹಾಸು. ಬೀಸುತಿರುವ ತಂಗಾಳಿ ಎದುರಿಗೆ ಇದ್ದಕ್ಕಿದ್ದಂಗೆ ಯಾರೋ ಬಂದಂತಾಗಿ ತಲೆ ಎತ್ತಿ ನೋಡಿದಾಗ ಅವನೇ !!! ಮೊದಲ ಸರ್ತಿ ಅವನನ್ನ ಸಾಕ್ಷಾತ್ ನೋಡಿ ಎದೆಯ ತಾಳ ತಪ್ಪಿತ್ತು. ಕಣ್ಣುಗಳಲ್ಲಿ ಅವಕರಿವಿಲ್ಲದಂತೆ ಹೊಳಪು ಹೆಚ್ಚಾಗಿತ್ತು. ಎದೆಯ ಸಂತಸ ತುಟಿ ಬಿರಿದು ಹೇಳುತ್ತಿತ್ತು. ಅವನ ಕಣ್ಣುಗಳೂ ನಗುತ್ತಿದ್ದವು, ತುಂಟನಗೆಯೊಂದು ತುಟಿಯಮೇಲೆ. ಮಾತುಗಳೇ ಹೊರಡುತ್ತಿಲ್ಲ ನನಗೆ. ಹಾಯ್ ಎನ್ನುತ್ತ ಅವನು ಕೈ ಕುಲುಕಿದಾಗ ತಂಗಾಳಿಯಲ್ಲೂ ಬೆವೆತಂತೆ ಅನುಭವ. ಕೊನೆಗೂ ಕೇಳಿದೆ "ಏನಿಲ್ಲಿ?" ಅವನು ಏನೋ ಉಸುರಿದ. ಅದ್ಯಾಕೆ ಅವನ ಧ್ವನಿ ಅಲಾರ್ಮ್ ಸದ್ದಿನಂತೆ ಕೇಳುತ್ತಿದೆ?! ಅರೇ.....ಅದು ಅಲಾರ್ಮ್ ಸದ್ದೇ. ಹೀಗಿತ್ತು ನಮ್ಮಿಬ್ಬರ ಮೊದಲ ಭೇಟಿ....‌.........‌‌ಕನಸಿನಲಿ!!

ಸಂಧ್ಯಾರಾಗ

Image
(Image courtesy: Pinterest)  ಬಾ ಗೆಳೆಯ...ಕೈಪಿಡಿದು ತೊರೆಯ ತೀರಕೆ ನಮಗೆಂದೇ ಕೆಲಕ್ಷಣಗಳ ಮುಡಿಪಾಗಿಸುವುದಕೆ ಹರಿಯುವ ನೀರಲಿ ಕಾಲಿಳಿಬಿಟ್ಟು ಜಾರುವ ನೇಸರನಲಿ ನೋಟವಿಟ್ಟು ಸಂಜೆ ಓಕುಳಿಯಲ್ಲಿ ಮುಳುಗೇಳುತ ಪಿಸುಮಾತಿನ ಬಿಸಿಯುಸಿರಲಿ ನಸುನಾಚುತ ಕೈಬೆರಳುಗಳ ಬೆಸೆದು ಸವಿಗನಸುಗಳ ಹೆಣೆದು ಒಲವಿನ ದೋಣಿಯಲಿ ಇಂದು ವಿಹರಿಸುವಾ ಮಿಡಿವ ಸಂಧ್ಯಾರಾಗದಲಿ ಹೃದಯಗಳ ಭಾವ  ವಿನಿಮಯದಲಿ ನಾವಿಂದು ಮೂಕಪ್ರೇಕ್ಷಕರಾಗುವಾ

ಬಾಲ್ಯದ ನೆನಪು

Image
ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಧಾರವಾಡದ ಸಾಧನಕೇರಿಯಲ್ಲಿ ತವರುಮನೆ.ಪಾಟಿಚೀಲ ಬೆನ್ನಿಗೇರಿಸಿ ಬಸ್ಸಿಗಾಗಿ ಬೇಂದ್ರೆ ತಾತನ ಮನೆ ಮುಂದಿರುವ ಬಸ್ ನಿಲ್ದಾಣದಲ್ಲಿ ಕಾದು ನಿಲ್ಲುತ್ತಿದ್ದುದು, ತುಂಬಿಕೊಂಡೇ ಬರುತ್ತಿದ್ದ ಬಸ್ ಏರಲು ಅದೇನು ಪರದಾಟ.ಮೊದಲನೇ ಇಯತ್ತೆಯಿಂದ ಡಿಗ್ರಿ ಮುಗಿಯುವವರೆಗೂ ಸಿಟಿ ಬಸ್ನಲ್ಲೇ ಪ್ರಯಾಣ. ಶಾಲೆಯ ವಿರಾಮದಲ್ಲಿ ಗೆಳತಿಯರೆಲ್ಲರೂ ಕುಳಿತು ಎಲ್ಲರೂ ಊಟದ ಡಬ್ಬಿಯಿಂದ ಒಂದೊಂದು ತುತ್ತು ತೆಗೆದು ತಿನ್ನುತ್ತಿದ್ದದ್ದು.ನನಗೆ ಖಾರ ಇಷ್ಟವೆಂದು ಒಬ್ಬ ಸ್ನೇಹಿತೆ ಅವರ ಮನೆಯಲ್ಲಿ ಮಾಡುವ ಮಸಾಲೆ ಖಾರವನ್ನು ನನಗೆಂದೇ ಜಾಸ್ತಿ ಹಾಕಿಕೊಂಡು ಬಂದು ಕೊಡುತ್ತಿದ್ದದ್ದು.ಹೈಸ್ಕೂಲ್ ನಲ್ಲಿ ಹುಡುಗರ ಜೊತೆಮಾತನಾಡಲು ಅದೇನೊ ಹಿಂಜರಿಕೆ.ಕ್ರಶ್ ನ ಜೊತೆ ಮಾತನಾಡಲು ನಾಚಿಕೆ, ಆದರೂ ಮಾತನಾಡುವ ಬಯಕೆ😃.ಗೆಳತಿಯರು ಎಲ್ಲ ಸೇರಿ ಶಾಲೆ ಹತ್ತಿರದ ಅಂಗಡಿಯಲ್ಲಿ ಹತ್ತು ಪೈಸೆಗೊಂದು ಸಿಗುತ್ತಿದ್ದ ಕೆಂಪು ಶೇಂಗಾ ಚಿಕ್ಕಿ ತಿನ್ನುತ್ತಿದ್ದದ್ದು. ಆ ಹತ್ತು ಪೈಸ ಚಿಕ್ಕಿ ಕೊಡುತ್ತಿದ್ದ ಸಂತಸ ಈಗೀನ ಡೇರಿಮಿಲ್ಕ್ ಸಿಲ್ಕ್, ಅಮುಲ್ ಚಾಕಲೇಟ್ ತಿಂದರೂ ಬರದು.ತಮ್ಮನ ಜೊತೆ ತಿಂಡಿಗಾಗಿ, ಮಾಡಬೇಕಾಗಿರುವ ಕೆಲಸಕ್ಕಾಗಿ ಜಗಳವಾಡುತ್ತಿದ್ದದ್ದು.ಕೊನೆಗೆ ಅಮ್ಮನ ಕಡೆ ಬೈಸಿಗೊಂಡು ಸುಮ್ಮನಾಗುತ್ತಿದ್ದದ್ದು. ನಾವು ಆಡುತ್ತಿದ್ದದ್ದು ಮನೆ ಹೊರಗಿನ ಆಟಗಳೇ. ಆಡಿ ಆಡಿ ಸುಸ್ತಾಗಿ ಕೊನೆಗೆ ಅಮ್ಮನ ಕೈಲಿ ಬೈಸಿಕೊಂಡು ಮನೆ ಸೇರುತ್ತಿದ್ದದ್ದ...

ಸಂತಸ

Image
ಸೂರ್ಯೋದಯದ ಎಳೆಬಿಸಿಲು ನೀ ಬಿಸಿಲಲಿ ಬೀಸುವ ತಂಗಾಳಿ ನೀ ಸಾಗರದ ಅಲೆಗಳ ನರ್ತನ ನೀ ಹರಿವ ನದಿಯ ನಿನಾದ ನೀ ಮುದನೀಡುವ ಸೂರ್ಯಾಸ್ತವು ನೀ ಮನಕೆ ತಂಪೆರೆವ ಬೆಳದಿಂಗಳು ನೀ ಮೊದಲ ಮಳೆಯ ಕಂಪು ನೀ ಹಕ್ಕಿಗಳಿಂಚರದ ಇಂಪು ನೀ ಪಾರಿಜಾತದ ಸುಗಂಧ ನೀ ಮಗುವಿನ ಮುಗ್ಧ ನಗುವು ನೀ ವಸಂತದ ಚಿಗುರಿನ ಚೆಲುವು ನೀ ಮಳೆಹನಿಗಳ ನಿನಾದ ನೀ ಇನ್ನೂ ಹೇಗೆ ಬಣ್ಣಿಸಲಿ ಹೇಳು ನಾ? ನನ್ನೆದೆಯ ಸಂತಸದ ಹೊನಲು ನೀ.

ಹೀಗೊಂದು ಪ್ರೇಮ ಸಂಧ್ಯಾ

Image
ರಂಗೇರಿದ ಸಂಜೆ  ಕಡಲ ದಂಡೆಯಲ್ಲಿ ಬರಿಗಾಲಲ್ಲಿ ತಣ್ಣನೆಯ  ಮರಳ ಮೇಲೆ ಮೆಲ್ಲಗೆ ಸಾಗುತ್ತಿದ್ದ  ಅವರ ಕೈ ಬೆರಳುಗಳು ಮೊದಲ ಬಾರಿಗೆ ಒಂದಕ್ಕೊಂದು  ಬೆಸೆದವು. ಸೂರ್ಯಾಸ್ತದ ಬಾನ ಕೆಂಪು ಅವಳ ಕೆನ್ನೆಗೆ ಸಿಂಚನವಾಯಿತೇನೊ ಅನ್ನುವಂತೆ ಅವಳ ಕೆನ್ನೆಗಳು ರಂಗೇರಿದವು.  ಅವನಿಗೂ ರೋಮಾಂಚನ, ಇಬ್ಬರ ಮೊಗದ ಮೇಲೆ ನಗು. ಅಲೆಗಳ ಸ್ಪರ್ಶ ಅನುಭವಿಸುತ್ತ  ಮೌನದಿ ಹೆಜ್ಜೆ ಹಾಕಿದ್ದರು. ಅವರ ಹೃದಯಗಳು  ಸಂಭಾಷಣೆಯಲ್ಲಿ  ನಿರತವಾದವು. ಒಮ್ಮೊಮ್ಮೆ ನಾವು ತುಟಿಯಿಂದ ಏನೂ  ಹೇಳದಿದ್ದರೂ ಹೃದಯಗಳು ಅರಿತುಬಿಡುತ್ತವೆ. ಮನೆಗೆ ಹೋಗಲು ಕಾತರನಾಗಿದ್ದ ಆ ನೇಸರ ಮುಗುಳ್ನಗುತ್ತ ಇವರಿಬ್ಬರ ಪ್ರಣಯಕ್ಕೆ ಸಾಕ್ಷಿಯಾಗಿದ್ದ.

ಕಪ್ಪೆ ಚಿಪ್ಪು

Image
ನೀಲಿ ಬಾನಿನಡಿ ಭೋರ್ಗರೆವ ಶರಧಿ ಹುದುಗಿಹುದು ಒಡಲೊಳಗೆ ಅದೆಷ್ಟು ಜೀವರಾಶಿ ಅದೆಷ್ಟು ಬಣ್ಣದ ಬಟ್ಟೆ  ತೊಟ್ಟಿದ್ದವೀ ಮೃದ್ವಂಗಿಗಳು ಮೇಲ್ಮೈ ತುಂಬ ಚಂದದ  ಚುಕ್ಕೆಗಳು , ಗೆರೆಗಳು ಉಸಿರಿರುವವರೆಗೆ ಅಂಬುಧಿಯ ಒಡಲು ನಿರ್ಜೀವವಾದೊಡೆ ಹೊರಗೆಸೆಯುವುದು ಕಡಲು ಈಗವಕೆ ಮನೆಯು ಈ ಮರಳತೀರ ಅನಿವಾರ್ಯ ಸಹಿಸುವುದು ಕಾಲ್ತುಳಿತದ ಭಾರ ಮಕ್ಕಳಿಗೆ ಕೌತುಕವು ಇವುಗಳ ಹೆಕ್ಕಲು ಪುಟ್ಟ ಪುಟ್ಟ ಕೈಗಳಲಿ ಕಪ್ಪೆಚಿಪ್ಪುಗಳೇ ತುಂಬಲು ಹೆಕ್ಕಿಕೊಂಡವು ಸೇರುವವು ಮಕ್ಕಳೊಡನೆ ಮನೆಯ ಇನ್ನುಳಿದವುಗಳಿಗೆ ಮತ್ತೆ ಮರಳೇ ಆಶ್ರಯ -ಸೀಮಾ

ಕನಸುಗಳು

Image
ಆಗತಾನೇ ರೆಕ್ಕೆ ಬಲಿತು ತಾಯಿ ಮಡಿಲಿಂದ ಹೊರಬಂದು ಗರಿಗೆದರಿ ಹಾರಲು ಅಣಿಯಾದ ಪುಟ್ಟ ಹಕ್ಕಿಗಳ ಹಾಗೆ ಮನದ ಗೂಡಲ್ಲಿ ಗರಿಗೆದರಿದ ಹೊಸ ಕನಸುಗಳು ಪ್ರಿಯಕರನ ಕಾಣಲು ಕಣ್ಣ ಕಾಂತಿಯು ಇಮ್ಮಡಿಯಾಗಿ ತುಟಿಮೇಲೆ ಸಿಹಿನಗೆಯು ಮೂಡಿ ಎದೆಯರಳುವಂತೆ ಮನದ ತೋಟದಲ್ಲಿ ನಗುತ ಬಿರಿಯುತಿರುವ ಹದಿನಾರರ ಹರೆಯದಂತ ಕನಸುಗಳು   ಹಸಿರು ಹುಲ್ಲುಗಾವಲಿನಲಿ ಹಗ್ಗ ಬಿಚ್ಚಿಕೊಂಡು ಪುಟ್ಟ ಆಕಳ ಕರುವೊಂದು ನೆಗೆನೆಗೆದು ಓಡುವ ಹಾಗೆ ಮನದಗಾವಲಿನಲ್ಲಿ ಹುಚ್ಚೆದ್ದು ಕುಣಿವ ಸುಂದರ ಹೊಂಗನಸುಗಳು ದೂರದ ಹಾದಿ, ನಡೆನಡೆದು ಸುಸ್ತಾಗಿ ದಾರಿಬದಿಗಿನ ಮರದಡಿಯಲಿ ದಣಿವಾರಿಸಲು ಕುಳಿತ ಮುದಿಜೀವದಂತೆ ವಸಂತಗಳಿಂದ ಮನದ ದಾರಿಯಲಿ ನಡೆದು ಇನ್ನೂ ಗಮ್ಯ ಸೇರದ ಹಳೆಯ ಕನಸುಗಳು ಬೆಳಗಿನಿಂದ ಅಮ್ಮನನ್ನು ಕಾಣದೇ ಆಕೆಯನ್ನು ಹುಡುಕಿಕೊಂಡು ಹೋಗಿ ಅಮ್ಮನ ಬಿಸಿಯಪ್ಪುಗೆಯಲ್ಲಿ  ಸಾರ್ಥಕತೆ ಕಂಡಂತೆ ಕಷ್ಟದ ದಾರಿಯಲಿ ನಡೆದು ಕೊನೆಗೂ ಪೂರ್ತಿಯಾಗಿ  ಮನಕೆ ಸಾರ್ಥಕತೆ ಸಿಕ್ಕ ಕನಸುಗಳು ಕಡಲಲೆಗಳ ಸೆಳೆತಕ್ಕೆ ತತ್ತರಿಸಿ  ಈಜಲು ಕೈ ಬಡಿಯಲಾಗದೇ ಕಡಲಾಳ ಸೇರಿ ಉಸಿರು ನಿಂತ ಜೀವಗಳಂತೆ ಜವಾಬ್ದಾರಿಯ ಸಾಗರದಲಿ ಈಜಲಾರದೆ ಉಸಿರುಗಟ್ಟಿ ಅಸುನೀಗಿದ ಕನಸುಗಳು ಹೀಗೇ ನೂರೆಂಟು ಬಗೆಯ ಆಸೆ,ಕನಸುಗಳ ಕಥೆಯೇ ಜೀವನ.

ದ್ವಂದ್ವ

Image
ಕಡಲ ದಡದಲಿ ನಿಂತಾಗ ಯೋಚನೆಯೊಂದು ಸುಳಿಯಿತು ಎರಡರಲ್ಲಿ ಯಾರು ಅಸಹಾಯಕರೆಂದು ಚಲಿಸಲಾಗದ ದಡವೋ ಚಲಿಸದೇ ಇರಲಾಗದ ಅಲೆಯೋ? ದಿನವೂ ಸಂಜೆಯಲಿ ಅಲೆಗಳ ಮೇಲೆ ತೇಲುತ ಹೋಗಿ  ರಂಗೇರಿದ ದಿಗಂತದಲ್ಲಿ ಜಾರುವ ರವಿಗೆ ಪ್ರೇಮದಿ ವಿದಾಯ ಹೇಳುವ ಆಸೆ  ಇರಬಹುದಲ್ಲವೇ ದಡಕೆ? ಹಗಲು ರಾತ್ರಿಯೆನ್ನದೇ ಏರಿಳಿದು ಕುಣಿಕುಣಿದು ದಡಕೆ ಬಂದಪ್ಪಳಿಸಿದಾಗ ದಡಕೆ ಆತು ಕುಳಿತು  ಕೊಂಚ ವಿರಮಿಸುವ ಬಯಕೆ ಇರಬಹುದಲ್ಲವೆ ಅಲೆಗೆ? ✍️ಸೀಮಾ

ಏನಾಗಲೀ?

Image
ನಿನ್ನ ಮುಂಗುರುಳ  ಸೋಕುವ ತಂಗಾಳಿಯಾಗಲೇ ನಿನ್ನ ಮೊಗವ ಸ್ಪರ್ಶಿಸುವ ಮಳೆ ಹನಿಯಾಗಲೇ ನಿನ್ನ ಕಂಗಳ ತಣಿಸುವ ಹೂವಾಗಲೇ ನಿನ್ನ ಮನವ ಮುದಿಸುವ ಕವಿತೆಯಾಗಲೇ ನಿನ್ನ ಕಿವಿಗೆ ಸಂತಸವೀವ ಹಾಡಾಗಲೇ ನಿನ್ನ ಘ್ರಾಣ ಆಹ್ಲಾದಿಸುವ ಪರಿಮಳವಾಗಲೇ ನೀನೊದಬಯಸುವ ಪುಸ್ತಕ ನಾನಾಗಲೇ ನೀನಿಷ್ಟ  ಪಡುವ  ಸಂಧ್ಯಾಕಾಲದ ಬಾನ ಕೆಂಪಾಗಲೆ ಹೇಳು ಗೆಳೆಯ...ಹೇಗೆ ನಿನ್ನೆದೆಯ ನಗುವಿಗೆ ಕಾರಣ ನಾನಾಗಲಿ?

ಮೊಬೈಲ್ ಎಂಬ ಮಾಯೆ

Image
ಮೊಬೈಲ್ ಎಂಬ ಜಾಲಕ್ಕೆ ಸಿಲುಕುವುದಕ್ಕೂ ಮೊದಲು ಬಾಲ್ಯಕ್ಕೆನೋ ಕಳೆಯಿತ್ತು. ಲಗೋರಿ,ಬುಗುರಿ,ಚೆಂಡು ಖೋಖೋ, ಚಿನ್ನಿದಾಂಡು ಜೀಕುತ್ತಿದ್ದೆವು ಜೋಕಾಲಿ ಆಣೆಕಲ್ಲು ಕೈಯಲ್ಲಿ ಐಸ್ಪೈ, ರೀಚಗಳೂ  ಮುಟ್ಟಾಟ,ಕುಂಟೆಬಿಲ್ಲೆಯೂ. ಮಳೆ ಬಂದಾಗ ನೀರಲ್ಲಿ ತೇಲುತ್ತಿದ್ದ ಕಾಗದದ ದೋಣಿಗಳು ಈಗ ಮರುಗುತ್ತಿವೆ. ಸಿಗಬಾರದೇ ಒಂದಿಷ್ಟು ಕೈಗಳು ತಮ್ಮನ್ನು ನೀರಲಿ ಹರಿಬಿಡಲೆಂದು ಕಾತರಿಸುತ್ತಿವೆ. ಮೊಬೈಲ್,ಟೀವಿಗಳ ಸೆಳೆತದಲಿ ಆ ಚಂದದಾಟಗಳು ಮುದುಡಿದವಲ್ಲ. ನವಯುಗದ ಈ ಪೀಳಿಗೆ ಆ ಮೋಜು ಕಳೆದುಕೊಂಡಿತಲ್ಲ.

ನೀನು

ಮನದ ತುಮುಲವೇನಿದ್ದರೂ ನಿನ್ನ ಮಾತುಗಳು ಸಾಕು ಮನವ ತಣ್ಣಗಾಗಿಸಲು ದುಗುಡವೆನಿದ್ದರೂ ನಿನ್ನ ನಗುಮುಖವೇ ಸಾಕು ತುಟಿಮೇಲೆ ನಗು ಸುಳಿಯಲು ಏಕಾಂತದಲ್ಲಿ ನೊಂದಾಗ ನೀನು ಕಂಡರೆ ಸಾಕು ನನ್ನ ತನು-ಮನವರಳಲು ನನಗಾಗಿ ನಿನ್ನ ಇರುವಿಕೆಯ  ಅನುಭೂತಿಯೇ ಸಾಕು ನಾನು ನೆಮ್ಮದಿಯಲಿ ದಿನದೂಡಲು